"SOMEವಾದ"
ಇಂದು ಗಣರಾಜ್ಯ್ಸೋತ್ಸವದ ದಿನ, ಬೇಗ ಎದ್ದು ಬಿಡೋಣ ಎಂದು ನೋಡಿದರೆ ಏಳೋ ಹೊತ್ತಿಗೆ ಘಂಟೆ ೧೦! ಸೂರ್ಯ ಎಂದಿನಂತೆ ನನಗಿಂತಾ ತುಂಬಾ ಬೇಗ ಎದ್ದು ತನ್ನ ಕೆಲಸದಲ್ಲಿ ಬಿಸ್ಸಿ ಆಗಿದ್ದ. ಟೀವಿಯಲ್ಲಿ ದೆಹಲಿಯ ಪಥ ಸಂಚಲನ ಶುರುವಾಗಿ ತುಂಬಾ ಹೊತ್ತಾಗಿತ್ತು. ಸರಿ ಹೇಗೋ ನಿತ್ಯಕರ್ಮಗಳನ್ನು ಮುಗಿಸಿ ಈ ದಿನದ ನನ್ನ ಮುಖ್ಯ ಮತ್ತು ಇಷ್ಟದ ಕಾರ್ಯಕ್ರಮ "ಓದುಗರೊಡನೆ ಒಂದಷ್ಟು ಸಮಯ" ಕ್ಕೆ ಹೊರಟೆ. ಸಾಲಾದ ರಜೆ ದಿನಗಳು ಇದ್ದರೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಏನೂ ತೊಂದರೆಯಾದಂತೆ ಕಾಣಲಿಲ್ಲ. ಟೌನ್ ಹಾಲ್ ಬಳಿಯ ವಾಹನ ದಟ್ಟಣೆಯಲ್ಲಿ ಸಿಲುಕಿದಾಗ " ಈ ಪಟ್ಟಣಕ್ಕೆ ಏನಾಗಿದೆ? ಎಲ್ಲೆಡೆ ಹೊಗೆಯೋ ಹೊಗೆ" ಎಂಬ ಜಾಹಿರಾತು ನೆನಪಾಗುತಿತ್ತು. ಅಂತೂ ಈ ಹೊಗೆ ಮತ್ತು ವಾಹನಗಳ ಸುಳಿಯಿಂದ ಹೇಗೋ ಈ ದಿನದ ಕಾರ್ಯಕ್ರಮ ಆಯೋಜಿಸಿದ್ದ ಸಪ್ನಾ ಬುಕ್ ಹೌಸ್ ಗೆ ತಲುಪಿದೆ. ಸಪ್ನಾ ಬುಕ್ ಹೌಸ್ ಭಾರತದ ದೊಡ್ಡ ಪುಸ್ತಕ ಮಳಿಗೆ. ಮೂರು ಮಹಡಿಯ ಈ ದೊಡ್ಡ ಕಟ್ಟಡದ ತುಂಬೆಲ್ಲಾ ಲಕ್ಷಾಂತರ ಪುಸ್ತಕಗಳು. ಪುಸ್ತಕ ಪ್ರೇಮಿಗಳ ಲಾಲ್ ಬಾಗ್ ಎಂದರೂ ಕಡಿಮೆಯೇ. ಬಾಣಂತನದಿಂದ ಮಗು ಹುಟ್ಟಿ ಬೆಳೆದು ಓದಿ ದುಡಿದು ಸಾಯುವವರೆಗೂ ಕಾಲಕಾಲಕ್ಕೆ ಬೇಕಾದ ಎಲ್ಲಾ ಪುಸ್ತಕಗಳೂ ಒಂದೆಡೆ ಸಿಗುವ ಭಂಡಾರ ಈ ಸಪ್ನಾ. ಕಾರ್ಯಕ್ರಮ ಎರಡನೆಯ ಮಹಡಿಯಲ್ಲಿ ನಿಯೋಜಿತವಾಗಿತ್ತು. ಹೋಗೊ ಹೊತ್ತಿಗೆ ಕೆಲ ಓದುಗರಿಂದ ಮತ್ತು ಸಂವಾದಕ್ಕೆ ಬಂದ ಜನರಿಂದ ಮಳಿಗೆ ಸ್ವಲ್ಪ ತುಂಬಿತ್ತು. ಅಲ್ಲಿನ ...