"SOMEವಾದ"

 


ಇಂದು ಗಣರಾಜ್ಯ್ಸೋತ್ಸವದ ದಿನ, ಬೇಗ ಎದ್ದು ಬಿಡೋಣ ಎಂದು ನೋಡಿದರೆ ಏಳೋ ಹೊತ್ತಿಗೆ ಘಂಟೆ ೧೦! ಸೂರ್ಯ ಎಂದಿನಂತೆ ನನಗಿಂತಾ ತುಂಬಾ ಬೇಗ ಎದ್ದು ತನ್ನ ಕೆಲಸದಲ್ಲಿ ಬಿಸ್ಸಿ ಆಗಿದ್ದ. ಟೀವಿಯಲ್ಲಿ ದೆಹಲಿಯ ಪಥ ಸಂಚಲನ ಶುರುವಾಗಿ ತುಂಬಾ ಹೊತ್ತಾಗಿತ್ತು. ಸರಿ ಹೇಗೋ ನಿತ್ಯಕರ್ಮಗಳನ್ನು ಮುಗಿಸಿ ಈ ದಿನದ ನನ್ನ ಮುಖ್ಯ ಮತ್ತು ಇಷ್ಟದ ಕಾರ್ಯಕ್ರಮ "ಓದುಗರೊಡನೆ ಒಂದಷ್ಟು ಸಮಯ"ಕ್ಕೆ ಹೊರಟೆ. ಸಾಲಾದ ರಜೆ ದಿನಗಳು ಇದ್ದರೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಏನೂ ತೊಂದರೆಯಾದಂತೆ ಕಾಣಲಿಲ್ಲ. ಟೌನ್ ಹಾಲ್ ಬಳಿಯ ವಾಹನ ದಟ್ಟಣೆಯಲ್ಲಿ ಸಿಲುಕಿದಾಗ " ಈ ಪಟ್ಟಣಕ್ಕೆ ಏನಾಗಿದೆ? ಎಲ್ಲೆಡೆ ಹೊಗೆಯೋ ಹೊಗೆ" ಎಂಬ ಜಾಹಿರಾತು ನೆನಪಾಗುತಿತ್ತು. ಅಂತೂ ಈ ಹೊಗೆ ಮತ್ತು ವಾಹನಗಳ ಸುಳಿಯಿಂದ ಹೇಗೋ ಈ ದಿನದ ಕಾರ್ಯಕ್ರಮ ಆಯೋಜಿಸಿದ್ದ ಸಪ್ನಾ ಬುಕ್ ಹೌಸ್ ಗೆ ತಲುಪಿದೆ.

ಸಪ್ನಾ ಬುಕ್ ಹೌಸ್ ಭಾರತದ ದೊಡ್ಡ ಪುಸ್ತಕ ಮಳಿಗೆ. ಮೂರು ಮಹಡಿಯ ಈ ದೊಡ್ಡ ಕಟ್ಟಡದ ತುಂಬೆಲ್ಲಾ ಲಕ್ಷಾಂತರ ಪುಸ್ತಕಗಳು. ಪುಸ್ತಕ ಪ್ರೇಮಿಗಳ ಲಾಲ್ ಬಾಗ್ ಎಂದರೂ ಕಡಿಮೆಯೇ. ಬಾಣಂತನದಿಂದ ಮಗು ಹುಟ್ಟಿ ಬೆಳೆದು ಓದಿ ದುಡಿದು ಸಾಯುವವರೆಗೂ ಕಾಲಕಾಲಕ್ಕೆ ಬೇಕಾದ ಎಲ್ಲಾ ಪುಸ್ತಕಗಳೂ ಒಂದೆಡೆ ಸಿಗುವ ಭಂಡಾರ ಈ ಸಪ್ನಾ.
ಕಾರ್ಯಕ್ರಮ ಎರಡನೆಯ ಮಹಡಿಯಲ್ಲಿ ನಿಯೋಜಿತವಾಗಿತ್ತು. ಹೋಗೊ ಹೊತ್ತಿಗೆ ಕೆಲ ಓದುಗರಿಂದ ಮತ್ತು ಸಂವಾದಕ್ಕೆ ಬಂದ ಜನರಿಂದ ಮಳಿಗೆ ಸ್ವಲ್ಪ ತುಂಬಿತ್ತು. ಅಲ್ಲಿನ ಪರಿಸ್ಥಿತಿ ನೋಡಿ ಸದ್ಯಕ್ಕಂತೂ ಈ ಕಾರ್ಯಕ್ರಮ ಶುರು ಆಗುವ ಸಾಧ್ಯತೆ ಕಡಿಮೆ ಎಂದೆನಿಸಿ ಎಲ್ಲರಂತೆ ನಾನೂ ಪುಸ್ತಕಗಳತ್ತ ಕಣ್ಣು ಹಾಯಿಸಿದೆ. ಎಂದಿನಂತೆ ತೇಜಸ್ವಿ ಮತ್ತು ಕುವೆಂಪುರವರ ವಿಭಾಗದ ಮುಂದೆ ನಿಂತು ಕೈಗೆ ಸಿಕ್ಕ ಕುವೆಂಪು ರವರ "ಬೆರಳ್ಗೆ ಕೊರಳ್" ಪುಟ ತಿರುವುತ್ತಾ ನಿಂತೆ. ಅದರಲ್ಲಿ ಬರುವ ಆನಂದಮಯ ಪದ್ಯ ಓದುತ್ತ ಮನಸ್ಸು ಬೇರೆಲ್ಲೋ ಪಯಣ ಹೊರಟಂತಿತ್ತು.

ಹಾಗೋ ಹೀಗೋ ಮುಕ್ಕಾಲು ಘಂಟೆ ಕಳೆಯುವ ಹೊತ್ತಿಗೆ ಆಯೋಜಕರ ಕೊಠಡಿಯಿಂದ ಅತಿಥಿಗಳಾದ ಪ್ರೊ. ನಿಸ್ಸಾರ್ ಅಹ್ಮದ್, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಜೋಗಿಯವರು ಹೊರಬಂದರು. ಆ ಕ್ಷಣಕ್ಕೆ ಅಲ್ಲಿನ ವಾತಾವರಣ ಸಾಹಿತ್ಯ ಮತ್ತು ಸೃಜನಶೀಲತೆಯ ತವರಾಯಿತು. ಟೀವಿಯಲ್ಲೋ ಪತ್ರಿಕೆಯಲ್ಲೋ ಕಾಣಸಿಗುವ ಈ ಸಾಧಕರು ಇಷ್ಟು ಸನಿಹದಲ್ಲಿ ಕಾಣಸಿಕ್ಕಾಗ ಹೇಳತೀರದ ಸಂತಸದಲ್ಲಿ ಮನ ತೇಲಾಡಿತ್ತು. ಎಲ್ಲರೂ ಇವರೆಡೆ ನೋಡುತ್ತಾ ನಿಂತಾಗ ನಮ್ಮಗಳ ಮಧ್ಯೆ ನುಸುಳಿ ಬಂದ ಒಬ್ಬ ವ್ಯಕ್ತಿ, ಸೀದಾ ಹೋಗಿ ಅತಿಥಿಗಳ ಪಕ್ಕ ನಿಂತಾಗಲೇ ಗುರುತಾದದ್ದು ಅವರು ಪತ್ರಕರ್ತ ವಿಶ್ವೇಶ್ವರ ಭಟ್ sir ಎಂದು.
ಸಭೆಗೆ ಬರಬೇಕಿದ್ದ ಎಲ್ಲಾ ಅತಿಥಿಗಳು ಬಂದರೆಂದು ಘೋಷಿಸಿ ಆಯೋಜಕರು ತಮ್ಮ ಸಪ್ನಾ ಮಳಿಗೆಯ ೫೧ನೇ ವಾರ್ಷಿಕೋತ್ಸವಕ್ಕೆ ಎಲ್ಲರನ್ನು ಸ್ವಾಗತಿಸಿದರು. ರಿಯಾಯಿತಿ ಪುಸ್ತಕಗಳ ವಿಭಾಗದ ಸುತ್ತಾ ಅತಿಥಿಗಳು ಹೆಜ್ಜೆ ಹಾಕಲು ಹತ್ತಾರು ಕ್ಯಾಮೆರಾ ಮಿಂಚುಗಳು ಪಟಪಟನೆ ಮಿಂಚಲಾರಂಭಿಸಿದವು. ನನ್ನ ಮೊಬೈಲ್ ಕ್ಯಾಮೆರಾದಲ್ಲಿ ನಾನು ಒಂದಷ್ಟು ಫೋಟೋ ಕ್ಲಿಕ್ಕಿಸಿದೆ. ಪತ್ರಕರ್ತ ಮಿತ್ರರ ಫೋಟೋ ತೆಗೆಯುವ ದೊಂಬರಾಟದಲ್ಲಿ ಸಾಹಿತಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ನನ್ನ ಆಸೆ ನೇಪಥ್ಯಕ್ಕೆ ಸರಿದಿತ್ತು! ಒಂದಷ್ಟು ಪುಸ್ತಕ ವೀಕ್ಷಣೆ, ಫೋಟೋಗೆ ಪೋಸ್ ಗಳ ನಂತರ ನಿಯೋಜಿಸಿದ್ದ ಜಾಗದಲ್ಲಿ ನಾಲ್ಕೂ ಅತಿಥಿಗಳು ಆಸೀನರಾದರು. ಸ್ಥಳಾವಕಾಶ ಕಡಿಮೆ ಇದ್ದುದ್ದರಿಂದ ನೋಡಲು ಬಂದಿದ್ದ ಪುಸ್ತಕಾಭಿಮಾನಿಗಳು ನಿಂತಕೊಂಡೆ ಇರಬೇಕಿತ್ತು. ಒಮ್ಮೆಲೇ ಆಯೋಜಕರು "ಸಿದ್ಧಲಿಂಗಯ್ಯ sir ಅವರು ಬರ್ತಿದಾರೆ ಸ್ವಲ್ಪ ಜಾಗ ಕೊಡಿ" ಎಂದು ಹೇಳುವುದ ಕೇಳಿ, ಇವರು ನಮ್ಮ "ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ..." ಖ್ಯಾತಿಯ ಕವಿ ಇರಬಹುದೇ ಎಂಬ ಕುತೂಹಲದಲ್ಲಿ ಕಾರ್ಯಕ್ರಮದ ಭಿತ್ತಿಪತ್ರದ ಕಡೆ ಕಣ್ಣು ಹಾಯಿಸಿದೆ. ಹೌದು ಅವರೇ! ಪ್ರೊ. ಸಿದ್ಧಲಿಂಗಯ್ಯ, ನಮ್ಮಗಳ ಮಧ್ಯೆ ನಗುಮೊಗದಿಂದ ಬಂದು ಉಳಿದ ಅತಿಥಿಗಳ ಪಕ್ಕ ಆಸೀನರಾದರು.
ಅಂತೂ ಸಂವಾದ ಶುರುವಾಯಿತು.... 

(ಮುಂದುವರೆಯುವುದು)

Comments

Popular posts from this blog

ತೋಚಿದ್ದು ಗೀಚು - ಕವನಗಳು

Akaashada Gaali Lyrics | Kyaabre | Tharle Box