ತೀರ್ಥಯಾತ್ರೆ - ಭಾಗ ೧
ತೀರ್ಥಯಾತ್ರೆ ಭಾಗ ೧ - ಅಂತೂ ಇಂತೂ ಕೋಟ ಬಂತು... - ಯತೀಂದ್ರ ಆಚಾರ್ಯ ಕೊರೊನ ಭಯದಿಂದ ವರ್ಷವಿಡೀ ಬೆಂಗಳೂರಲ್ಲೇ ಇದ್ದ ನಮಗೆ ಒಂದು ಪ್ರವಾಸ ಅತ್ಯಗತ್ಯವಾಗಿತ್ತು. ಆಗಸ್ಟ್ ತಿಂಗಳಲ್ಲಿ ಶುರುವಾದ ನಮ್ಮ ೫ ಜನರ ಸಹ್ಯಾದ್ರಿ ಪ್ರವಾಸದ ಚರ್ಚೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು ಅಕ್ಟೋಬರ್ ತಿಂಗಳ ಗಾಂಧಿಜಯಂತಿ ರಜೆಯಂದು. ಮುಂಜಾನೆ ಬೇಗ ಎದ್ದುಬಿಡಬೇಕೆಂಬ ಯೋಚನೆಯಲ್ಲೇ ರಾತ್ರಿ ಹೊತ್ತು ಕಳೆದರು ನಿದ್ರೆಯ ಸುಳಿವೇ ಇರಲಿಲ್ಲ. ಹೇಗೋ ಸಣ್ಣದೊಂದು ನಿದ್ರೆ ತೆಗೆದು , ಬೇಗನೇ ಎದ್ದು ನಿತ್ಯಕರ್ಮಗಳ ಮುಗಿಸಿ ಎಲ್ಲರೂ ಬೆಂಗಳೂರು ಬಿಡುವ ಹೊತ್ತಿಗೆ ಘಂಟೆ ೭ ಕಳೆದಿತ್ತು. ಗಾಡಿ ಹೆದ್ದಾರಿ ಸಮೀಪಿಸುತ್ತಿದಂತೆ ಒಮ್ಮೆಲೇ ಶುರುವಾಯ್ತು ವಾಹನ ದಟ್ಟಣೆ. ಸುಂಕ ವಸೂಲಾತಿ ಗಡಿಯ ಬಳಿ ಬಂದಾಗಲಂತೂ ಇಡೀ ಬೆಂಗಳೂರಿಗೆ ಬೆಂಗಳೂರೇ ಊರು ಬಿಟ್ಟಂತಿತ್ತು! ಊರು ದೂರವಾಗುತ್ತಾ ಹೋದಂತೆ ವಾಹನ ದಟ್ಟಣೆಯೂ ಕಡಿಮೆಯಾಯ್ತು. ಹಾಸನ - ಬೇಲೂರು - ಮೂಡಿಗೆರೆ ಮಾರ್ಗವಾಗಿ ಹೊರನಾಡು ಕ್ಷೇತ್ರಕ್ಕೆ ಹೊರಟ್ಟಿದ್ದೆವು. ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ದಾಟುವಾಗ ಮನಸ್ಸಲ್ಲಿ ಹೇಳತೀರದ ಸಂತಸ. ಸಾಹಿತ್ಯ ಲೋಕದ ಒಂಟಿ ಸಲಗ ಎಂದೇ ಖ್ಯಾತಿಯಾದ ಮತ್ತು ನನ್ನ ನೆಚ್ಚಿನ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಊರು! ಮನಸ್ಸು ಧನ್ಯತಾ ಭಾವದಲ್ಲಿ ತೇಲಿತ್ತು. ಮುಂದೆ ಕೊಟ್ಟಿಗೆಹಾರ, ಮಲೆನಾಡಿಗೆ ನಮ್ಮನ್ನು ಪ್ರೀತಿಯಿಂದ ಸ್ವಾಗತಿಸುವಂತೆ ಬಾಗಿ ನಿಂ...