ತೀರ್ಥಯಾತ್ರೆ - ಭಾಗ ೧
ತೀರ್ಥಯಾತ್ರೆ
ಭಾಗ ೧ - ಅಂತೂ ಇಂತೂ ಕೋಟ ಬಂತು...
- ಯತೀಂದ್ರ ಆಚಾರ್ಯ
ಮನಸ್ಸು ಧನ್ಯತಾ
ಭಾವದಲ್ಲಿ ತೇಲಿತ್ತು. ಮುಂದೆ ಕೊಟ್ಟಿಗೆಹಾರ, ಮಲೆನಾಡಿಗೆ ನಮ್ಮನ್ನು ಪ್ರೀತಿಯಿಂದ ಸ್ವಾಗತಿಸುವಂತೆ
ಬಾಗಿ ನಿಂತಂತಿತ್ತು ಆ ಮಹಾದ್ವಾರ.
ಮುಂದೆ ಮುಂದೆ ಹೋದಂತೆ
ಪ್ರಕೃತಿಯಲ್ಲಿ ಮೆಲ್ಲಮೆಲ್ಲನೆ ಆದ ಬದಲಾವಣೆಗೆ ನಮ್ಮೆಲ್ಲರ ಮನಸ್ಸು ಖುಷಿಯಿಂದ ಕುಣಿದಿತ್ತು. ಜಡಿ
ಮಳೆಗೆ ಮಿಂದೆದ್ದ ಹುಡುಗಿಯಂತೆ ಮೈದಳೆದು ನಿಂತಿತ್ತು ಪ್ರಕೃತಿ! ಮಲೆನಾಡ ಸೊಬಗು ಸವಿದಷ್ಟೂ ಕಡಿಮೆ,
ಬಣ್ಣಿಸಿದಷ್ಟು ಕಡಿಮೆ, ಕಣ್ಣ್ತುಂಬಿಕೊಂಡಷ್ಟು ಕಡಿಮೆ. ನಿಸರ್ಗದ ಆ ರಮಣೀಯತೆಗೆ ಅನುಗುಣವಾಗಿ ಇಂಪಾದ
ಹಾಡುಗಳ ಮೆರವಣಿಗೆಗೆ ಸಂತಸ ಮೇರೇ ಮೀರಿತ್ತು.
ಹೊರನಾಡಿಗೆ ತಲುಪಿದಾಗ
ಸಮಯ ಮಧ್ಯಾಹ್ನ ೧ ಕಳೆದಿತ್ತು. ಹೊರನಾಡು ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುವ ಶ್ರೀ ಕ್ಷೇತ್ರ.
ಎತ್ತ ನೋಡಿದರು ದಟ್ಟ ಕಾನನ, ಕಾನನ ತುಂಬಿದ ಪರ್ವತ ಶ್ರೇಣಿಗಳು, ಪರ್ವತ ಶ್ರೇಣಿಗಳ ಮಧ್ಯೆ ಕಣ್ಣ್ ಮನ
ತಣಿಸುವ ಸ್ಥಳ ಹೊರನಾಡು ಕ್ಷೇತ್ರ. ಸರ್ವಾಲಂಕೃತವಾಗಿ ಸಿಂಗಾರಗೊಂಡ ಆ ದೇವಿಯ ನೋಡಲು ಕಣ್ಣುಗಳೆರಡು
ಸಾಲದು. ಹೊರನಾಡಿನ ಮತ್ತೊಂದು ಸೊಬಗು ಅಲ್ಲಿನ ಪ್ರಸಾದ ಅಂದರೆ ಭೋಜನ. ಮನದಣಿಯೆ ಪ್ರಸಾದ ಸ್ವೀಕರಿಸಿ
ಸಂತ್ರಿಪ್ತಿಯಿಂದ ಹೊರನಾಡಿಗೆ ಸಾಷ್ಟಾಂಗ ಹೇಳಿ ಮುಂದೆ ಹೊರಟದ್ದು ಶೃಂಗೇರಿಗೆ.
ಹೊರನಾಡಿಂದ ಶೃಂಗೇರಿಗೆ
ಶಾಂತಿಗ್ರಾಮದ ಮಾರ್ಗಾವಾಗಿ ಹೊರಟೆವು. ಮನಸಲ್ಲಿ ಸ್ವಲ್ಪ ಅಳುಕಿತ್ತು ಏಕೆಂದರೆ ಶೃಂಗೇರಿಗೆ ಈ ದಾರಿ
ಹತ್ತಿರವಾದರೂ ಬಹು ದುರ್ಗಮ ದಾರಿ, ಕಾರಣ ದಟ್ಟ ಕಾಡಿನ ಮಧ್ಯೆ ಸಾಗುವ ದಾರಿ ಇದು. ಮಾರ್ಗ ಮಧ್ಯೆ ಎಲ್ಲಾದರೂ
ಗಾಡಿ ಹಾಳಾದರೆ ದೇವರೇ ಗತಿ! ಅಂಥಹಾ ದಾರಿ, ಹಿಂದೊಮ್ಮೆ ಹಾಗೆ ಆಗಿತ್ತು ಕೂಡ. ಮುಂದೆ ಹೋದಂತೆ ಎಲ್ಲೆಡೆ
ಬೃಹದಾಕಾರವಾದ ಮರಗಳು ಒಂದು ಬದಿಗೆ ಪರ್ವತ ಇನ್ನೊಂದು ಬದಿಗೆ ಆಳವಾದ ಪ್ರಪಾತ. ದೂರದಲ್ಲಿ ಒಂದಕ್ಕೊಂದು
ಕೈ ಕೈ ಜೋಡಿಸಿ ಮೋಡಗಳ ನೆರಳಲ್ಲಿ ನಿಂತ ಸಹ್ಯಾದ್ರಿ ಸಾಲು ಸಾಲು ಪರ್ವತಗಳು. ಅಲ್ಲಲ್ಲಿ ಒಮ್ಮೆಲೇ
ಇಳಿಜಾರಾಗುವ ರಸ್ತೆ, ಕಡಿದಾದ ತಿರುವುಗಳು, ಸಣ್ಣ ಝರಿಗಳು, ಸ್ವಚ್ಛಂದ ಓಡಾಡುವ ನವಿಲುಗಳು, ಮನುಷ್ಯರ
ಸುಳಿವೇ ಕಾಣದ ಪ್ರಶಾಂತವಾದ, ನಯನ ಮನೋಹರ ಹಸಿರ ಹಾಸಿನ ಪಯಣ.
ಕಣ್ಣ್ ಮನ ಆಹ್ಲಾದಗೊಂಡು
ಶೃಂಗೇರಿ ತಲುಪಿದಾಗ ಸಂಜೆ ೬ ಕಳೆದಿತ್ತು. ಸಂಜೆಯಾ ಆ ರಕ್ತವರ್ಣದ ಆಗಸದ ರಂಗಲ್ಲಿ ಶೃಂಗೇರಿಯ ರಸ್ತೆ
ರಸ್ತೆಗಳಲ್ಲಿ ದೈವತ್ವ ಮೈದೋರಿತ್ತು. ಶುಭ್ರವಾಗಿ ಪ್ರಶಾಂತವಾಗಿ ಹರಿವ ತುಂಗೆಯಲಿ ಕೈ ಕಾಲು ಸ್ವಚ್ಛಗೊಳಿಸಿ
ತಾಯಿ ಶಾರದೆಯ ದರ್ಶನಕ್ಕೆ ಹೊರಟೆವು. ದೂರದಲ್ಲೆಲ್ಲೋ ಧ್ವನಿವರ್ಧಕದಲ್ಲಿ ವೇದ ಪಾರಾಯಣ ಕಿವಿಗೆ ಇಂಪು
ನೀಡಲು, ಸಂಜೆ ರಂಗಲ್ಲಿ ನಿಂತ ವಿದ್ಯಾಶಂಕರ ಮಂದಿರ ಕಣ್ಣಿಗೆ ತಂಪು ನೀಡಿತ್ತು. ಆದಿ ಶಂಕರಾಚಾರ್ಯ
ಸ್ಥಾಪಿತ ಶಾರದಾ ದೇವಿಯ ದರ್ಶನ ಮನದಲ್ಲಿ ಅದೊಂದು ಬಗೆಯ ಸಾರ್ಥಕ್ಯ ಭಾವ ನೀಡಿತ್ತು.
ಮುಂದಿನ ನಮ್ಮ ದಾರಿ ಆಗುಂಬೆ ಹಾದಿಯಾಗಿ ಕೋಟ ತಲುಪುವುದು. ಆಗುಂಬೆ ದಾಟುವಾಗ ಮಾಲ್ಗುಡಿ ಡೇಸ್ ಧಾರಾವಾಹಿಯ ನೆನಪುಗಳು. ಆ ಊರು, ಅಂಗಡಿಗಳು, ಹಳೆ ಮನೆಗಳು, ಕಾಲ ತುಂಬಾ ಬದಲಾದರು ಹಳೆಯ ಛಾಪನ್ನು ಒಂದು ಮಟ್ಟಿಗೆ ಉಳಿಸಿಕೊಂಡಿರುವ ಊರು ಆಗುಂಬೆ. ಹಾಗೆ ಊರು ದಾಟಿ ಒಂದೆರಡು ತಿರುವು ತಿರುಗುವಷ್ಟರಲ್ಲಿ ಒಮ್ಮೆಲೇ ಏನೊಂದು ಕಾಣದ ಹಾಗೆ ದಟ್ಟವಾದ ಹಿಮ. ಆಗಲೇ ನೆನಪಾದದ್ದು ಇಲ್ಲಿಂದ ಶುರು ಕರ್ನಾಟಕದ ಪ್ರಸಿದ್ಧ ಸ್ಥಳ, ಆಗುಂಬೆ ಘಾಟಿ! ಎಂದು. ಒಂದರ ಮೇಲೆ ಒಂದರಂತೆ ಕಡಿದಾದ ತಿರುವುಗಳು. ಪ್ರಕೃತಿಯೇ ವಾಹನ ಚಾಲನೆ ಪರೀಕ್ಷೆ ಮಾಡುವ ಜಾಗ ಇದು. ಮೋಡಗಳ ಒಳಗೆ ನುಸುಳುತ್ತಾ, ತಿರುವಿನಲ್ಲಿ ಎದುರು ಬರುವ ವಾಹನಗಳಿಗೆ ಮನಸೋ ಇಚ್ಛೆ ಬಯ್ಯುತ್ತಾ, ಕೂಗುತ್ತಾ, ಕಿರುಚುತ್ತಾ ಆಡಿದ ಹುಚ್ಚಾಟಕ್ಕೆ ಸಾಕ್ಷಿಯಾದದ್ದು ಮೌನಿಯಾದ ಹಿಮಚ್ಛಾದಿತ ರಸ್ತೆಗಳು. ಹಾಗೂ ಹೀಗೋ ಜೀವ ಕೈಲಿ ಹಿಡಿದು ಘಾಟಿ ಇಳಿದು ನಿಧಾನಕ್ಕೆ ಹೆಬ್ರಿ, ಬ್ರಹ್ಮವರದ ಮಾರ್ಗವಾಗಿ ಕೋಟ ತಲುಪುವ ಹೊತ್ತಿಗೆ ಸಮಯ ರಾತ್ರಿ ೧೦!
ಮುಂದುವರೆಯುವುದು...








ಅಕ್ಷರಗಳೂ ಯಾತ್ರೆಯನ್ನು ಹೊರಟಂತೆ ಅನಿಸಿದೆ..
ReplyDeleteGreat Experience!! Waiting for the next part..
ಧನ್ಯವಾದಗಳು... Thank you so much..
DeleteSuper experience yathindra.
ReplyDeleteThank you so much..
Deleteಸುಂದರ ಪ್ರವಾಸ ಕಥನ... ನಿಮ್ಮ ಬರವಣಿಗೆ ಲೋಕದ ಮೂಲಕ ನಾವು ಆ ತಾಣಗಳಲ್ಲಿ ನಡೆದಾಡಿದಂತಾಯಿತು...
ReplyDeleteಸುಂದರ ಪ್ರವಾಸ ಕಥನ... ನಿಮ್ಮ ಬರವಣಿಗೆ ಲೋಕದ ಮೂಲಕ ನಾವು ಆ ತಾಣಗಳಲ್ಲಿ ನಡೆದಾಡಿದಂತಾಯಿತು...
ReplyDeleteಒಂದೊಂದು ಅಕ್ಷರ ಗಳು ತೋಚಿದ್ದು ಗೀಚು ಎನ್ನುವ ಅರ್ಥದಲ್ಲಿ ಇರಲಿಲ್ಲ ನಿಮ್ಮ ಪ್ರವಾಸದ ಅನುಭವಗಳೇ ನಿಮ್ಮ ಕಥನ ದಲ್ಲಿ ಮರುಕಳಿಸುವಂತೆ ಇದೆ......ನನ್ನ ಪ್ರಕಾರ ......ಮುಂದಿನ ಕಥನ ದಲ್ಲಿ ತಿಳಿಸುತ್ತೇನೆ........
Delete