ತೋಚಿದ್ದು ಗೀಚು - ಕವನಗಳು


ತೋಚಿದ್ದು ಗೀಚು - ಕವನಗಳು 
ಯತೀಂದ್ರ ಆಚಾರ್ಯ




ನಡಿಗೆಯಾ ಪ್ರತಿ ಹೆಜ್ಜೆಗೂ ಮನವು ಕೇಳಿದೆ 
ನಿನ್ನಯಾ ಅಪ್ಪಣೆ
ನನ್ನಯಾ ಪ್ರತಿ ಮಾತಿನ ಎಲ್ಲಾ ಭಾವವೂ 
ನಿನಗೆಯೇ ಅರ್ಪಣೆ 
ಇನಿಯಾ ಈ ಸಂಜೆಯು ಏನಿತು ಹಿತವಾಗಿದೇ
ಬಳಿಯಲಿ ನೀ ಸುಳಿದಾಡಲು ಮನವು ಹಗುರಾಗಿದೆ 
ಈಗ ಬೆಚ್ಚನೆ ಅಪ್ಪುಗೆ ಸಾಕೆನು ಸಲ್ಲಾಪಕೆ..!


      


<3
ಮೊದಲನೇ ನೋಟದೆ ಸೆರೆಯಾದೆ ನನ್ನಲಿ,
ಸೆರೆಯಾಳು ನೀನು, ಶಿಕ್ಷೆ ನನಗಿಲ್ಲಿ
ಕಾಡಿಲ್ಲ ಯಾರು ಹಿಂದೆಂದೂ ಈ ಪರಿಯಲಿ,
ಮುತ್ತಿರುವೆ ನೀ.. ಪ್ರತಿ ಇರುಳು ಕನಸಲಿ, ಪ್ರತಿ ಇರುಳು ಕನಸಲಿ
ಸಮಯ ಸರಿಯುತಿದೆ ನಿನ್ನ ನೆನಪಿನಪ್ಪುಗೆಯಲ್ಲಿ,
ಬಂಧಿಸಿಹೆ ನೀ ಪ್ರೀತಿ ಸಂಕೋಲೆಯಲಿ
ದಾಳಿಯಾಗಿದೆ ನಿನ್ನ ಮಾತು ಮುತ್ತಿನಲಿ,
ಸೆರೆಯಾಳು ನೀನು ಶಿಕ್ಷೆ ನನಗಿಲ್ಲಿ, ಸೆರೆಯಾಳು ನೀನು, ಶಿಕ್ಷೆ ನನಗಿಲ್ಲಿ




      



ಮುಗಿಲಾ ನೋಡುತಾ ಮಳೆಗೆ ಕಾಯುವಾ 
ಕಣ್ಣಿಗೆ ಸಿಲುಕಿದೆ ಗಾಳಿಯಾ ಕಸಗಳು,
ಬಿತ್ತಿದಾ ಬೀಜವು ಹೊರಗೆ ಇಣುಕಲು 
ತೇವದಾ ಕೊರತೆಗೆ ಬೆಳೆಯಿಂದು ಕಂಗಾಲು...  
ಉದ್ದುದ್ದ ಮರಗಳು ಭೂಮಿಯೆಡೆ
ಬಗ್ಗುವಾ ಹಾಗೆ ನುಗ್ಗುತಿದೆ ಗಾಳಿ 
ಬೆಳೆ ಕೈ ಹಿಡಿಯುವಾ ಆಸೆಯಲಿ
ಬೀಜ ಬಿತ್ತಿದ ಕೈಗಿಂದು ಗಾಳಿಯ ಪ್ರತಿದಾಳಿ... 
ಗಾಳಿ ಕಳೆದು, ಮೋಡ ಕರಗಿ, ವರ್ಷ ಧಾರೆಯಾಗಲಿ 
ಕಾಯುತಿಹ ಕೈಗಳಿಗೆ ಕೆಲಸ ತುಂಬಿ ಬೆಳೆ ಇಮ್ಮಡಿಯಾಗಲಿ
ಹಚ್ಚ ಹಸಿರಿನ ಕೆಸರು ಗದ್ದೆಗಳೆ ರೈತನಿಗೆ ನೆಮ್ಮದಿಯ ನೆಲೆಯು 
ಅವ ಬಿತ್ತಿ ಬೆಳೆದರೆ ತಾನೆ ನಮ್ಮ ನಿಮ್ಮೆಲ್ಲರಾ ನಾಳೆಯು... 


      



ಮೌನಗಳೆ ಮಾತಾಗಿ ನಡೆಯೆಲ್ಲವು ಹೊಸದಾಗಿ 
ನೆನಪೆಲ್ಲಾ ನವಿರಾಗಿ ಖುಷಿಯೇ ನೀನಾಗಿ,
ಬಂದಿಹೆ ಬಾಳಲಿ ಮತೊಮ್ಮೆ ನನ್ನ ಸಲುವಾಗಿ 
ಬೇರೇನೂ ಬೇಡದ ಹಾಗಿದೆ ನಿನ್ನ ವಿನಾ ನನಗಾಗಿ, 
ನೋಡಿದೆಡೆಯೆಲ್ಲಾ ಬರುವೆ ನೀ ಒಲವಾಗಿ 
ಒಲವೇ ಉಳಿದಿರಲು ಬಾಳಲಿ ನಮಗಿಂದು,
ನನ್ನನೇ ಉಡುಗೊರೆ ಕೊಡುವೆ ಗೆಳತಿ ನಿನಗೆ, 
ಆಗುವೆಯಾ ನೀ ನನ್ನಾ ಅರ್ಧಾಂಗಿ


      



ನೀ ಪ್ರೀತಿಸು ಈ ನೆಲವ..
ಸಹ್ಯದ್ರಿಯಾ ಶ್ರೇಣಿಯಲಿ, 
ಕರಾವಳಿಯ ಅಲೆಗಳಲಿ,
ಕೋಟೆ ಕೊತ್ತಲುಗಳ ಇತಿಹಾಸದಲಿ, 
ಜೋಗ ಮಾಗೋಡುಗಳ ರೌದ್ರತೆಯಲಿ,
ವಿಜಯನಗರ ಮೈಸೂರುಗಳ ವೈಭವದಲಿ, 
ತೇಗ ಶ್ರೀಗಂಧಗಳ ಸಾಲುಗಳಲಿ,
ಸಂಗೀತ ನಾಟ್ಯಗಳ ಸಂಭ್ರಮದಲಿ, 
ಕಲೆ ಕಾವ್ಯ ಸಾಹಿತ್ಯ ಭಂಡಾರದಲಿ, 
ಪ್ರಾಣಿ ಪಕ್ಷಿಗಳ ಸಹಬಾಳ್ವೆಯಲಿ, 
ನದಿ ಸರೋವರಗಳ ಸೆಳೆವಿನಲ್ಲಿ,
ವಿವಿಧ ಪಂಥಗಳ ಸೋಗಿನಲ್ಲಿ, 
ಆಗುಂಬೆ ಮಲೆನಾಡಿನ ನಿಗೂಢತೆಯಲಿ 
ಕಂಗೊಳಿಸುತಿಹ ಈ ನೆಲವ.. 
ನೀ ಪ್ರೀತಿಸು ಈ ನೆಲವ, 
ನಮ್ಮ ಕನ್ನಡವ, ಕರ್ನಾಟಕವ


      



ತುಸು ಸನಿಹದೆ ಪಿಸು ನುಡಿಯಲಿ ಹೇಳಿಬಿಡು ನೀ ಇಂದು 
ನಸು ನಾಚಿಕೆ ತುಟಿ ಸೇರಲು ಕಾರಣವು ನಾನೆಂದು
ಅನುರಾಗಕೋ ಅನುಕಂಪಕೋ ಇದ್ದುಬಿಡು ನನ್ನಾ ಬಳಿಯೇ
ನೆಪವೊಂದು ಬೇಕು ನನಗೆ ಕಿರುನಗೆಯ ತಾರಲು ಹೊರಗೆ
ಎಷ್ಟು ಸಲ ಬೀಳಲಿ ಇನ್ನು ಪ್ರೀತಿಯಲಿ ಹೀಗೆ.


      




ನೋಡಿದಷ್ಟು ಬೇಕೆನಿಸೋ ಅಷ್ಟು, 
ಕಣ್ ತೆಗೆದರೂ ಕಣ್ ಸೆಳೆಯೋ ಅಷ್ಟು!
ಚೆಲುವಿಗೇ ನಾಚಿಕೆ ಮುಡಿಸೋ ಅಷ್ಟು, 
ಇಷ್ಟ ಅನ್ನೋ ಪದಕ್ಕೇ ಕಷ್ಟ ಆಗೊ ಅಷ್ಟು!
ಸೀರೆಯಿಂದ ನೀನಲ್ಲ, ಸೀರೆಯೇ ನಿನ್ನ ಇಷ್ಟಪಡೋ ಅಷ್ಟು, 
ಅಷ್ಟು ಇಷ್ಟು ಇನ್ನಷ್ಟು ಮತ್ತಷ್ಟು ನೋಡಿದರೂ ಸಾಲದಷ್ಟು 
ಮೋಹಕವಾದ ನಿನ್ನ ಬಗ್ಗೆ ಅನಿಸಿದ್ದು ಅಷ್ಟು....
ಹೇಳಿದ್ದು ಇಷ್ಟು.!


      




ಮುಗಿಲಿನಷ್ಟು ಎತ್ತರದ ಸಂಭಂದಗಳು,
ಕಡಲಿನಷ್ಟು ವಿಸ್ತಾರದ ಜೀವನ,
ಏರಿದಷ್ಟು ಕೈಗೆಟುಕದ ಸಂಬಂಧಗಳ ಆಗಸ,
ಈಜಿದಷ್ಟು ಮುಗಿಯದ ಜೀವನ ಸಾಗರ,
ದೂರದಲ್ಲೆಲ್ಲೋ ಎರಡೂ ಸೇರಿದ ಪರಿ,
ಆದರೂ ಎಂದೂ ಸೇರದ ಈ ಶಿಖರಗಳ ನಡುವೆ,
ಕ್ಷಣಿಕ ಸುಮಧುರ ಸಂಚಾರ ಮೂಡಿಸಬಲ್ಲ 
ಮಳೆಯೇ ಪ್ರಕೃತಿ, ಪ್ರೀತಿ...


      



ಹೂ ಬಿಡೊ ಋತುವಿದು ನೀ ಬಂದೆ ಬಳಿಗೆ..
ಮನಸಿದು ಚಿಗುರಿದೆ ಈ ಚೆಂದ ಘಳಿಗೆ..
ಅರಿವಿರದಾ ಈ ಸಲುಗೇ, ಅಡಿಯಿಡುವೆ ಪ್ರೀತಿ ಸುಳಿಗೇ
ಮನ ಮಾಗಿದೇ... ಮುದವಾಗಿದೇ...
ಹದವಾಗಿ ಹೊದಿಸೀಗ ಪ್ರೀತಿ ಅಪ್ಪುಗೆ


      



ಈ ಬದುಕಲಿ ಪ್ರತಿ ದಾರೀಲಿ ನಿನ್ನ ಜೊತೆಯಲಿ ನಾ ಸಾಗುವೆ..
ಎಂದೆಂದಿಗೂ ಮಿತಿ ಮೀರಿದಾ ಅತಿ ಪ್ರೀತಿಯಾ ನಾ ನೀಡುವೆ.. 
ನೀನೆ ತುಂಬಿಹ ನನ್ನಾ ಬಾಳಲಿ ಕಳೆದುಹೋದೆ ನಾನೇ.. 
ಕಂಡೆ ಕನಸಲಿ ಬಂದೆ ನನಸಲಿ ಹೇಗೆ ಎಲ್ಲು ನೀನೆ.. 
ನೀನೆ... ನೀನೆ...


      



ಮುದ್ದು ಮುದ್ದು ಮಾತಲಿ ನೀ ನನ್ನ ಮನವಾ ಕೆಣಕುತಿರೆ
ಮತ್ತೆ ಮತ್ತೆ ನಿನ್ನೆಡೆ ನಾ ಆಸೆಗಣ್ಣಲಿ ನೋಡುತಿರೆ
ಹೀಗೆ ನನ್ನ ಬಳಿಯಲಿ ಅನುಕ್ಷಣವೂ ಇರಲು ಜೊತೆಗೆ ಮುಡಿಪಿದು ನನ್ನೊಲವೂ
ಕನಸಿನಲ್ಲೂ ನನಸಿನಲ್ಲೂ ಬಿಡದೆ ನನ್ನ ಮನಸ ಗೆಲ್ಲೋ
ಇವಳೇ ನನ್ನವಳು...


      



ಪ್ರೀತಿ ಬಂದು ಜೊತೆಗೆ ಇನ್ನು 
ಜನುಮ ಕಳೆಯೋಣ ಎನುತಲಿದೆ, 
ನನ್ನಾ ಎಲ್ಲ ಅಳತೆ ಮೀರಿ 
ಪ್ರೀತಿ ಬೆಳೆದಂತೆ ಅನಿಸುತಿದೆ,
ನನ್ನಾ ಜೀವ ಇನ್ನು ನಿನ್ನದೆಂದೆಂದು ಕೇಳೆ ಒಲವೆ, 
ಈ ಭಾವಕೆ ನೀ ಜೀವವು ಪ್ರೀತಿಯೊಂದೆ ಉಸಿರಾಟವು.


      



ಹಚ್ಚ ಹಸಿರ ಸೀರೆಯಾ ಉಡಿಸಿ,
ಮಂಜಿನಾ ಮಲ್ಲಿಗೆಯಾ ಮುಡಿಗೆ ತೊಡಿಸಿ,
ಸಿಂಗರಿಸಿದ ಮದುವಣಗಿತ್ತಿಯಾ 
ನೋಡುವೆ ನೀನೆಲ್ಲಿ??
ಸಹ್ಯಾದ್ರಿಯ ಮಡಿಲಲ್ಲಿ


      



ನೆನಪೆಲ್ಲ ಮುಗಿದು ಮಾತೆಲ್ಲ ಕಳೆದು 
ಮೌನದೇ ಉತ್ತುಂಗದಿ ನಿಂತು ಮನಸು ಹಗುರಾಗಲು
ನಿಂತು ನೋಡಿದಷ್ಟು ಕೂತು ಸವಿದಷ್ಟೂ
ಇನ್ನಷ್ಟು ಮತ್ತಷ್ಟು ಹುಚ್ಚೆಬ್ಬಿಸುತಿಹ ಈ ಭೂರಮೆಯ
ಕಣ್ಣೊಳಗೆ ತನ್ನೊಳಗೆ ತುಂಬಿಕೊಳ್ಳಲು
ಕಾತುರದೆ ಹವಣಿಸುತಿಹ ಸಮಯದಿ
ತಣ್ಣನೆಯ ಗಾಳಿಯೊಂದು ಕಣ್ಣ್ ಮುಚ್ಚುತಾ ಮೈ ಸವರಲು ಒಮ್ಮೆಲೇ
ಪ್ರಕೃತಿಯೇ ತನ್ನೆಡೆಗೆ ಕರೆದಂತಾಯಿತು ಆಲಂಗಿಸಿದಂತಾಯಿತು


      



ಕೇಳಲಿ ಹೇಗೆ ನೀ ನನ್ನ ಪ್ರೀತಿಸು ಎಂದು
ಕೇಳಲಿ ಹೇಗೆ?? ನೀ.. ನನ್ನ ಪ್ರೀತಿಸು ಎಂದು..??
ಕೇಳದ ಹಾಗೆ ನೀ ಹೋಗುವೆ ಎಂದಿನಂತೆ ಇಂದೂ..
ಆದರೂ ಬಿಡೆನು ನಾ ನಿನ್ನ ಪ್ರೀತಿಸುವುದನ್ನೆಂದು
ಆದರೂ.. ಬಿಡೆನು ನಾ.. ನಿನ್ನ ಪ್ರೀತಿಸುವುದನ್ನೆಂದೂ..
ನೂರು ಬಾರಿ ನೀ ಒಪ್ಪಿದ್ದರೂ
ನೂರು ಬಾರಿ.. ನೀ.. "ಒಪ್ಪಿದ್ದರೂ"..
ನೂರೊಂದನೇ ಬಾರಿ ಕೇಳುವ ಆಸೆ ನನ್ನದು,
ನೂರೊಂದನೇ ಬಾರಿ ಕೇಳುವ ಆಸೆ ನನ್ನದು..!! 

      



ಏರುವಾಗ ಹಸೆಮಣೆ, ಬರಿದಾಯಿತಲ್ಲ ಈ ಕೊನೆ..
ಅವಳಿಲ್ಲದಂತೆ ಅರಿವಿಲ್ಲದಂತೆ, ಕಳೆದಾಯಿತು ನನ್ನನೇ..
ಉಕ್ಕಿ ಬರುವ ದುಃಖವ, ತಡೆದಿಟ್ಟು ನಗುವ ಜೀವವ,
ಕಾಣದೆಯೆ ಹೋದೆ ಕಾಯುತಲಿ ನೊಂದೆ, 
ಕೊನೆಯಿಲ್ಲದಾ ಯಾತನೆ..
ಮನಸಾಯಿತು, ಮರವಾಯಿತು,
ಮರುಘಳಿಗೆಯೇ ಮರೆಯಾಯಿತೋ..

      





ಏನೈತ್ರಿ ಆಕಿ ಒನಪು ವಯ್ಯಾರ ಬಿನ್ನಾಣ 
ನೆಪ್ಪಾದಾಗೆಲ್ಲ ಮನಸ್ನ್ಯಾಗ ಏನೋ ಒಂದ್ ನಮೂನಿ ತಲ್ಲಣ 
ಸಿಗ್ತಾತ್ ಏನ್ರೀ ಮತ್ ಆ ಹೂವಿನ್ ಎಸಳಂಥಾ ಮೃದು ಚುಂಬನ 
ಸಿಕ್ಕಿದ್ರೂ ಬ್ಯಾಡ್ರಿ 
ಹೂಗಿನ್ನಾ ಆ ಮುಳ್ಳು ಕೊಡೋ  ನೋವೇ ಹೆಚ್ಚಾಗ್ಯಾದೋ ಸಿವನಾ!!

      





ಒಲವೆ ಹನಿಯಾಗಿ ಹನಿಯು ಹಲವಾಗಿ 
ಕನಸು ನನಸಾಗೊ ಘಳಿಗೆ, 
ಅದುವೆ.. ಪ್ರೀತಿಯ ಮಿಲನ! 
ಜಿಗಿಯೋ ಝರಿಯಾಗಿ ಹರಿಯೋ ನದಿಯಾಗಿ 
ಸಾಗಿ ಬರುವಾಸೆ ಬಳಿಗೆ,  
ಮರಳಿ.. ಸೇರುವೆ ನಿನ್ನನಾ!
ದೂರವೇ ಬಳಿ ಸಾಗಿಯೂ ಸಾಲದು ನಿನ್ನ ಸೇರಿಯೂ 
ನಾ ಒಲವಲೀ ಮಿಂದಿರೊ ಪ್ರೇಯಸೀ..


      




ಕನಸಿನಾ ಮಾತಿದು ಇಂದಿಗೂ ನೆನಪಿದೆ
ಆದರೂ ಮನಸಿದು ನಂಬದೆ ಹೋಗಿದೆ
ಕಡಲಿನ ತೀರದಿ ನಿನ್ನಯಾ ಸನಿಹದೆ
ಹೇಳಿಯೂ ಮುಗಿಯದಾ ಮಾತದು ನೂರಿದೆ
ದೂರದಿ ಬಾನದು ಭೂಮಿಯಾ ಅಪ್ಪಿದೆ
ಕಾಣಲು ಮನವಿದು ನಳಿಸುತಾ ಹಿಗ್ಗಿದೆ
ಬಾಗಲು ನಿನ್ನೆಡೆ ಹೆಗಲದು ಕಾದಿದೆ
ಕೈಯ ನೀ ಹಿಡಿಯಲು ನಾಚಿಕೆ ಮುಂದಿದೆ
ಕನಸದು ನನಸಿದು ಒಂದೆಯೇ ಆಗಿದೆ
ಆದರೂ ಮನಸಿದು ನಂಬದೆ ಹೋಗಿದೆ


      




ಹೂಬಿಡುವ ಸಮಯವಿದು ಹಿತವಾಗಿದೆ
ನೀ ಬರುವ ದಾರಿಯನು ಅಣಿ ಮಾಡಿದೆ
ಬಾನಾಡಿ ಬಾಗಿ ನನ್ನ ಕೂಗಿದೆ
ನೀ ಬರುವ ಸೂಚನೆಯ ನನಗ್ಹೇಳಿದೆ
ನನ್ನುಸಿರೆ ನಿನಗಾಗಿ ನಾ ಕಾಯುವೆ
ನೆನಪಲ್ಲಿ ನಾನು ಜಗಮರೆಯುವೇ

      




ಕರೆವಾಗ ನಾನು.. ಸ್ವರ ಇಂಗಿದೆ ಇನ್ನೂ
ಬರಲಿಲ್ಲ ನೀನು.. ಬರೋದಾರಿಯಾ ಕಾಣೆನೂ
ಕರಗುತಿದೇ ಕಣ್ಣೆದುರೇ ಕನಸುಗಳು
ಕಣ್ ಹನಿಗಳದೇ.. ಕರೆಯೋಲೇ...!
ಓ ಒಲವೆ ಕಾಯುತಲಿರುವೇ 

      







 ಶ್ರೇಣಿಯಲಿ, ಕರಾವಳಿಯ ಅಲೆಗಳಲಿ,
ಕೋಟೆ ಕೊತ್ತಲುಗಳ ಇತಿಹಾಸದಲಿ, ಜೋಗ ಮಾಗೋಡುಗಳ ರೌದ್ರತೆಯಲಿ,
ವಿಜಯನಗರ ಮೈಸೂರುಗಳ ವೈಭವದಲಿ, ತೇಗ ಶ್ರೀಗಂಧಗಳ ಸಾಲುಗಳಲಿ,
ಸಂಗೀತ ನಾಟ್ಯಗಳ ಸಂಭ್ರಮದಲಿ, ಕಲೆ ಕಾವ್ಯ ಸಾಹಿತ್ಯ ಭಂಡಾರದಲಿ, 
ಪ್ರಾಣಿ ಪಕ್ಷಿಗಳ ಸಹಬಾಳ್ವೆಯಲಿ, ನದಿ ಸರೋವರಗಳ ಸೆಳೆವಿನಲ್ಲಿ,
ವಿವಿಧ ಪಂಥಗಳ ಸೋಗಿನಲ್ಲಿ, ಆಗುಂಬೆ ಮಲೆನಾಡಿನ ನಿಗೂಢತೆಯಲಿ 
ಕಂಗೊಳಿಸುತಿಹ ಈ ನೆಲವ.. 
ನೀ ಪ್ರೀತಿಸು ಈ ನೆಲವ, ನಮ್ಮ ಕನ್ನಡವ, 

ಕರ್ನಾಟಕವ.

Comments

  1. Super ella lines galu ❤️❤️🙏🏾🙏🏾

    ReplyDelete
  2. ಎಲ್ಲ ಕವನಗಳು ತುಂಬ ಸೊಗಸಾಗಿದೆ

    ReplyDelete
  3. ನಿಮ್ಮ ಕವನದ ನೆನಪಿನಲ್ಲಿ


    ಅಂಬರದ ಚಪ್ಪರದಡಿ
    ವಸುಂಧರೆಯ ಹೂ ಹಾಸಿನ ನಡುವೆ
    ಕರದಲ್ಲಿ ಮಂಗಳ ಸೂತ್ರವ ಹಿಡಿವ
    ಜೀವಮಾನದ ಅತಿ ಸುಂದರ ಕ್ಷಣಕೆ
    ಕಾಯುತಿಯ ನಿನ್ನೀ ಆ ದಿನಕೆ ನನ್ನಿ ಶುಭಾಶಯ ಗೆಳತಿ..

    ReplyDelete

Post a Comment

Popular posts from this blog

Akaashada Gaali Lyrics | Kyaabre | Tharle Box

"SOMEವಾದ"